ಟೇಕವಾಡಾ -
ಮಹಾರಾಷ್ತ್ರದ ಜಳಗಾವ್ ಜಿಲ್ಲೆಯಲ್ಲಿ ಗಿರನಾ ನದಿಯ ದಂಡೆಯ ಮೇಲಿರುವ ಒಂದು ಸಣ್ಣ ಹಳ್ಳಿ. ಇಲ್ಲಿ ಶಿಲಾ-ತಾಮ್ರಯುಗದ ಶ್ಮಶಾನ ನೆಲೆಯನ್ನು ಶೋಧಿಸಲಾಗಿದೆ. (1956). ಇಲ್ಲಿ ಒಂದು ಶವ-ಕುಣಿ ಮತ್ತು ಮೂರು ಪ್ರತ್ಯೇಕ ಅಸ್ಥಿಪಾತ್ರೆಯ ಸಮಾಧಿಗಳನ್ನು (ಅರ್ನ್ ಬರಿಯಲ್) ಅಗೆಯಲಾಗಿದೆ. ಶವ-ಕುಣಿಯಲ್ಲಿ 1.55 ಮೀ. ಉದ್ದದ, ಉತ್ತರ-ದಕ್ಷಿಣವಾಗಿ ಮಲಗಿಸಿದ, ವಯಸ್ಕನ ಅಸ್ಥಿಪಂಜರವಿತ್ತು. ಕಾಲ ಬಳಿಯಲ್ಲಿ ಬೂದು ಮತ್ತು ನೇರಳೆ ಬಣ್ಣದ ರೇಖಾಚಿತ್ರವಿದ್ದ ಕೆಂಪು ಮೃತ್ ಪಾತ್ರೆಗಳಿದ್ದವು. ಇವಲ್ಲದೆ, ಸುಂದರವಾಗಿ ಚಿತ್ರಿಸಿದ ಕೆಂಪು ಹೂಜಿಯೂ ಇತ್ತು.

	ಅಸ್ಥಿಪಾತ್ರ್ರೆಗಳು ಬೂದು ಬಣ್ಣದವಾಗಿ, ದಪ್ಪವಾಗಿ ಒರಟಾಗಿ, ಗುಡಾಣದಂತಿದ್ದುವು. ಎರಡರಲ್ಲಿ ಅಸ್ಥಿ ಅವಶೇಷಗಳಿದ್ದವು. ಅವುಗಳ ಬಾಯಿಗಳನ್ನು ಗೋಲಾಕೃತಿಯ ಪಾತ್ರೆಗಳಿಂದ ಮುಚ್ಚಲಾಗಿತ್ತು. ಅವುಗಳ ಪೈಕಿ ಒಂದರಲ್ಲಿ ಎರಡೂ ಇನ್ನೊಂದರಲ್ಲಿ ಐದೂ ಗೋಲಾಕೃತಿಯ ಪಾತ್ರೆಗಳಿದ್ದವು. ಅವು ಕಪ್ಪು ಮತ್ತು ಬೂದು ಬಣ್ಣಗಳವು. ಒಂದರೊಳಗೆ ಕೆಲವು ಕಲ್ಲಿನ ಮಣಿಗಳು ಇದ್ದುವು. ಈ ದ್ವಿವರ್ಣ ಪಾತ್ರೆಗಳ ಒಳಗೂ ಹೊರಗೂ ಹೂಜಿಯ ಮೇಲೂ ಅರ್ಥಗರ್ಭಿತ ಗೀರುಗಳಿದ್ದವು. ಅದೇ ಪ್ರದೇಶದಲ್ಲಿ ಗಿರನಾ ನದಿಯು ಪಶ್ಚಿಮ ದಂಡೆಯ ಮೇಲೆ ಬಹಾಳ್‍ನಲ್ಲಿ ದೊರಕಿದ ಶಿಲಾ-ತಾಮ್ರಯುಗ ದಕ್ಷಿಣ ಭಾರತದ ಬೃಹತ್ ಶಿಲಾಸಂಸ್ಕøತಿಯ ದ್ವಿವರ್ಣ ಪಾತ್ರೆಗಳಿಗೆ ಆಕಾರದಲ್ಲಿ. ಬಹುಮಟ್ಟಿಗೆ ಹೋಲುತ್ತವೆ.
(ಎ.ಎಸ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ